Saturday, December 18, 2021

ಮಕ್ಕಳ ನೀತಿಕತೆಗಳ ಸಂಗ್ರಹ ಗಾದೆಮಾತು ಕೂತು ತಿಂದರೆ ಕುಡಿಕೆ ಹೊನ್ನು ಸಾಲದು

ಗೂಗಲ್ ಇಮೇಜ್ ಚಿತ್ರಕೃಪೆ

ಗಾದೆಮಾತು : ಕೂತು ತಿಂದರೆ ಕುಡಿಕೆ ಹೊನ್ನು ಸಾಲದು. 

ಮಕ್ಕಳ ಸಾಹಿತ್ಯ ವಿಭಾಗದಲ್ಲಿ ನೀತಿಕತೆಗಳ ಸಂಗ್ರಹ.

ಬತ್ತದ ತೊರೆ ಸ್ನೇಹ ಬಳಗ,ಬೆಂಗಳೂರು

ಕೋಟ ಶಿವರಾಮ ಕಾರಂತರ ನೆರಳಿನಡಿಯಲ್ಲಿ... 


ಸ್ಪರ್ಧೆ ಮಕ್ಕಳ ನೀತಿ ಕತೆಗಳು

ವಿಷಯ--ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು.

******************************

      ದುಡಿತದಲ್ಲಿದೆ ಸುಖ

******************************

ಮಕ್ಕಳೇ,ಹಣವಿದೆಯೆಂದು, ಕೈಕಾಲು ಗಟ್ಟಿ ಇದ್ದು, ದುಡಿದುಣ್ಣುವ ಕಾಲದಲ್ಲಿ, ವಿಲಾಸಿ ಜೀವನ ನಡೆಸುತ್ತ,ಮೋಜು ಮಸ್ತಿಯಲ್ಲಿ, ಇದ್ದ ಹಣವನ್ನೇ ಖಾಲಿ ಮಾಡುತ್ತ ಹೋದರೆ,ಹಣದ ಗುಡಾಣವಿದ್ದರೂ ಕರಗಿ ಹೋಗುವದು. ಆದ್ದರಿಂದ ಹಿರಿಯರು ತಮ್ಮ ಅನುಭವ, ಅನುಭಾವ ಆಧರಿಸಿ, ಮುಂದಿನ ಪೀಳಿಗೆಯ ಹಿತಕ್ಕೋಸ್ಕರ  " ಕೂತು ತಿಂದರೆ ಕುಡಿಕೆ ಹೊನ್ನು ಸಾಲದು " ಎಂಬ ಗಾದೆಮಾತನ್ನು ಹೇಳಿದ್ದಾರೆ.

           ಈಗ ನಿಮಗೆಲ್ಲಾ ಈ ಕುರಿತಾಗಿ ಕಥೆ ಹೇಳುವ ಸಮಯ. ಗಮನವಿಟ್ಟು ಕೇಳಿ. ಹೀಗೊಂದು ಸುರಪುರ ಎಂಬ ಹಳ್ಳಿ. ಹೆಸರಿಗೆ ತಕ್ಕಂತೆ ಸುರಪುರ ಸೃಷ್ಟಿ ಸೌಂದರ್ಯಕ್ಕೆ ಹೆಸರಾದ ಊರು.ಹಿಂದೆ ಅಲ್ಲಿ ರಾಜರ ಆಳ್ವಿಕೆ ಇತ್ತೆಂದೂ ಜನರಾಡಿಕೊಳ್ಳುತ್ತಿದ್ದರು. ಆದರೆ ಅಲ್ಲಿ ಇರುವ ಬಹಳ ಜನ ಬಡವರು. ಅವರಲ್ಲಿ ಕಣ್ಣ ಎಂಬ ವ್ಯಕ್ತಿ, ತನ್ನ ಹೆಂಡತಿ ಮತ್ತು ಮಗಳೊಡನೆ ವಾಸವಾಗಿದ್ದ. ಅವನು ದಿನಾ ಹೊತ್ತು ಹುಟ್ಟುವ ಮೊದಲೇ ಎದ್ದು, ಹೆಂಡತಿ ಕೊಟ್ಟ ಗಂಜಿ ಕುಡಿದು, ದೂರದ ಕಾಡಿಗೆ ಕಾಲ್ನಡಿಗೆಯಲ್ಲಿ ಹೋಗಿ, ಒಣ ಕಟ್ಟಿಗೆ ಸಂಗ್ರಹಿಸಿ ತಂದು, ಪಟ್ಟಣದಲ್ಲಿ ಮಾರಾಟಮಾಡುತ್ತಿದ್ದ. ಮಕ್ಕಳೇ,ಆಗಿನ ಕಾಲದಲ್ಲಿ ಈಗಿನಂತೆ, ಗ್ಯಾಸ್ ಒಲೆ, ಕರೆಂಟ್ ಒಲೆ ಇರಲಿಲ್ಲ.ಎಲ್ಲರೂ ಉರುವಲಕ್ಕೆ ಕಟ್ಟಿಗೆ ಖರೀದಿಸುತ್ತಿದ್ದರು.ಕಟ್ಟಿಗೆ ಮಾರಿ ಬಂದ ಹಣದಿಂದ ಕಣ್ಣ, ತೃಪ್ತಿಯಿಂದ ಜೀವನ ನಡೆಸುತ್ತಿದ್ದ.ಹೀಗೇಯೆ ಹಲವು ವರ್ಷ ಕಳೆಯಿತು.ಕಣ್ಣನ ಹೆಂಡತಿಗೆ ನಾವು ಎಲ್ಲರಂತೆ ಐಷಾರಾಮಿ ಜೀವನ ಮಾಡಬೇಕೆಂಬ ಹಂಬಲವಿದ್ದರೂ, ಬರುವ ಅಲ್ಪ ಹಣದಲ್ಲೇ ದಿನದೂಡುತ್ತಿದ್ದಳು. ಹೀಗಿರುವಾಗ ಒಂದು ದಿನ ಎಂದಿನಂತೆ ಕಣ್ಣ ಚುಮುಚುಮು ಬೆಳಗು ಕಾಡಿಗೆ ಹೊರಟ. ಆ ದಿನ ಈಗಿನಂತೆಯೇ ಮಾರ್ಗಶಿರ ಮಾಸ. ಎಲ್ಲೆಡೆ ಮಂಜು ಕವಿದಿತ್ತು. ಚಳಿಯಲ್ಲಿ ನಡುಗುತ್ತಲೇ ಕಣ್ಣ ನಡೆದ. ಆ ದಿನ ಅವನಿಗೆ ಅದೃಷ್ಟದ ದಿನ. ಆಗೆಲ್ಲಾ ಕಳ್ಳಕಾಕರು ಇದ್ದರಲ್ಲವೇ ? ಅವರೇ ಯಾರೋ ಗಡಿಬಿಡಿಯಲ್ಲಿ ಬಂಗಾರದ ನಾಣ್ಯ ತುಂಬಿದ ಬಿಂದಿಗೆಯನ್ನು ಬೀಳಿಸಿ ಹೋಗಿದ್ದರು.ಕಣ್ಣ ನೋಡಿ ಬಹಳ ಸಂತೋಷದಿಂದ ಬಿಂದಿಗೆಯೊಡನೆ ಮನೆಗೆ ಬಂದ. ಅದನ್ನು ನೋಡಿದ್ದೆ ಕಣ್ಣನ ಹೆಂಡತಿಗೆ ನೂರಾರು ಬಯಕೆಗಳು ಚಿಗುರೊಡೆದವು. ಆಕೆ ಮತ್ತೆ ಗಂಡನನ್ನು ಕಾಡಿಗೆ ಹೋಗದಂತೆ ತಡೆದಳು. ಇದ್ದ ನಾಣ್ಯ ಮಾರಿ, ಮನೆ ಕಟ್ಟಿಸಿದರು. ಮಗಳ ಮದುವೆ ಮಾಡಿದರು. ತಿಂದುಂಡು ಮಜವಾಗಿ ಕಾಲಕಳೆದರು. ಕ್ರಮೇಣ ಸಿಕ್ಕ ನಾಣ್ಯಗಳು ಖಾಲಿಯಾದವು. ಹೆಂಡತಿಯ ಮೈಮೇಲೆ ಮಾಡಿಸಿದ ಒಡವೆಗಳು ಗಿರವಿ ಅಂಗಡಿಗೆ ಸೇರಿದವು. ಮತ್ತೆ ಜೀವನಕ್ಕೆ ಕಾಡಿನ ಒಣ ಕಟ್ಟಿಗೆಯೇ ಗತಿಯಾಯ್ತು.

            ನೋಡಿದ್ರಾ ಮಕ್ಕಳೇ, ಹಣ ಸಿಕ್ಕಮೇಲೂ ಕಣ್ಣ ಕಟ್ಟಿಗೆ ತಂದು ಮಾರಿ ಜೀವನ ಮುಂದುವರೆಸಿದ್ದರೆ, ಶ್ರೀಮಂತನೆ ಆಗುತ್ತಿದ್ದ.

ನೆನಪಿಡಿ ಮಕ್ಕಳೇ, ಕಾಯಕವೇ ಕೈಲಾಸ. ಕಷ್ಟಪಟ್ಟು ದುಡಿದುಣ್ಣುವದರಲ್ಲಿಯೇ ಸುಖವಿದೆ.


ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ (ಉತ್ತರ ಕನ್ನಡ )

ವಿಷಯ:-ಕೂತು ತಿಂದರೆ ಕುಡಿಕೆ ಹೊನ್ನು ಸಾಲದು

ಶೀರ್ಷಿಕೆ:-ದುಡಿಮೆ


 ಒಂದೂರಲ್ಲಿ ರಾಮ ಸೋಮರೆನ್ನುವ ಅಣ್ಣತಮ್ಮಂದಿರಿದ್ದರು.ರಾಮ ಸೋಮರ ತಂದೆ ಹತ್ತೂರಿನ ಧನಿಕರಾಗಿದ್ದರು. ಅಣ್ಣತಮ್ಮರದ್ದು ವೈಭೋಗದ ಜೀವನವಾಗಿತ್ತು. ತಂದೆ ಗಳಿಸಿದ ಧನಗಳಿಂದ ರಾಮ ಸೋಮರು ವಿದ್ಯಾಭ್ಯಾಸ ಮುಗಿಸಿದರು.ರಾಮ ತಂದೆಯ ವ್ಯಾಪಾರ ವಹಿವಾಟುಗಳನ್ನು ನೋಡಿಕೊಂಡರೆ ಸೋಮ ತಿಂದುಂಡು ಆರಾಮವಾಗಿ ತಿರುಗಾಡಿಕೊಂಡು ಕಾಲಕಳೆಯುತಿದ್ದ.ಇದನ್ನೆಲ್ಲಾ ಗಮನಿಸುತ್ತಿದ್ದ ತಂದೆಗೆ ಸೋಮನದ್ದೇ ಚಿಂತೆಯಾಗಿತ್ತು. ಎಷ್ಟೇ ಬುದ್ದಿವಾದ ಹೇಳಿದರೂ ಸೋಮನ ತಲೆಗೆ ಹೋಗುತ್ತಿರಲಿಲ್ಲ. ಕೊನೆಯದಾಗಿ ತಂದೆ ಇಬ್ಬರಿಗೂ ಮದುವೆ ಮಾಡುವ ಯೋಚನೆ ಮಾಡಿದ. ಮದುವೆಯ ನಂತರವಾದರೂ ಸೋಮ ಸರಿಯಾಗಬಹುದು, ದುಡಿಯುವ ಮನಸ್ಸು ಮಾಡಬಹುದು ಎನ್ನುವುದು ತಂದೆಯ ಲೆಕ್ಕಾಚಾರವಾಗಿತ್ತು. ಹೀಗೆ ದಿನಗಳುರುಳಿ ಇಬ್ಬರಿಗೂ ಮದುವೆಯು ಆಯ್ತು.ಆದರೂ ಸೋಮನಲ್ಲಿ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಸೋಮನ ಹೆಂಡತಿಯೂ ಗಂಡನ ಬೇಜವಾಬ್ದಾರಿ ವರ್ತನೆಗೆ ರೋಸಿ ಹೋಗಿದ್ದಳು. ಯಾವುದೇ ಖರ್ಚುವೆಚ್ಚಗಳಿಗೆ ಮಾವ ಅಥವಾ ಭಾವನ ಎದುರು ಕೈಯೊಡ್ಡಬೇಕಾಗಿತ್ತು.ಹೆಂಡತಿಯ ಬುದ್ದಿವಾದವು ಸೋಮನ ಮನಸ್ಸಿಗೆ ನಾಟಲೆ ಇಲ್ಲ. ಹೇಳಿ ಹೇಳಿ ಸಾಕಾದ ಹೆಂಡತಿ ನಂತರದ ದಿನಗಳಲ್ಲಿ ಮೌನವಾದಳು.


ಸೋಮನ ಚಿಂತೆಯಲ್ಲಿಯೇ ತಂದೆ ಹಾಸಿಗೆ ಹಿಡಿದರು. ಒಂದುದಿನ ಸೋಮನನ್ನು ಬಳಿ ಕರೆದು "ನೋಡು ಮಗನೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು.ನನ್ನ ಅಜ್ಜ, ಅಪ್ಪ ನಾನು ಕಷ್ಟ ಪಟ್ಟು ದುಡಿದು ಸಂಪಾದಿಸಿರುವ ಧನಕನಕಗಳು ಎಷ್ಟು ಸಮಯ ಬರಲು ಸಾಧ್ಯ. ಕಷ್ಟಪಟ್ಟು ದುಡಿದರೆ ಮಾತ್ರ ಫಲ ಸಿಗಲು ಸಾಧ್ಯ. ನೀನು ಕೇಳಿಲ್ಲವೇ ಕೈ ಕೆಸರಾದರೆ ಬಾಯಿ ಮೊಸರು ಅಂತಾ. ಇನ್ನಾದರೂ ದುಡಿಮೆಯ ಕಡೆ ಗಮನ ಕೊಡು ಎನ್ನುತ್ತಾ ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲೇ ಪ್ರಾಣಬಿಟ್ಟರು.


ಉಂಡಾಡಿ ಗುಂಡನಂತೆ ತಂದೆಯ ಹಣದಲ್ಲೇ ಮೋಜು ಮಸ್ತಿ ಮಾಡುತ್ತ ದಿನಕಳೆಯುತ್ತ ಇದ್ದ ಸೋಮನನ್ನು ಹೇಗಾದರೂ ಮಾಡಿ ಸರಿಮಾಡಬೇಕು ಹೀಗೆ ಆದರೆ ಮುಂದೆ ಅವನ ಹೆಂಡತಿ ಮಕ್ಕಳ ಗತಿಯೇನು ಎಂದರಿತ ರಾಮ ತಂದೆಯ ಅಸ್ತಿಯನ್ನು ಪಾಲು ಮಾಡುವ ನಿರ್ಧಾರ ಮಾಡಿದ. ತಮ್ಮನಲ್ಲಿ ನಿನಗೆ ಸೇರಬೇಕಾದ ಆಸ್ತಿ ನಿನಗೆ ಕೊಡುತ್ತೇನೆ. ಮುಂದಿನ ನಿನ್ನೆಲ್ಲ ಖರ್ಚುವೆಚ್ಚಗಳನ್ನು ನೀನೇ ನೋಡಿಕೊಂಡು ಜೀವನ ನಡೆಸು ಎಂದ. ಸೋಮನಿಗೂ ಸಂತೋಷವಾಯಿತು. ಹೇಗೂ ತಂದೆಯ ಆಸ್ತಿ ಇದೆ ನನಗೆ ಹೇಗೆ ಬೇಕೋ ಹಾಗೇ ಖರ್ಚು ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ. ದಿನಗಳು ಕಳೆದಂತೆ ಹಣವು ಕರಗತೊಡಗಿತು. ಯಾರಲ್ಲೂ ಹೇಳೋ ಹಾಗೂ ಇಲ್ಲ ಕೇಳೋ ಹಾಗೂ ಇಲ್ಲ. ಖರ್ಚಿಗೆ ಹಣವಿಲ್ಲದೆ ಸೋಮು ಒದ್ದಾಡಿದ.ಕೂಡಿಟ್ಟ ಹಣ ಆಸ್ತಿ ಎಷ್ಟು ದಿನ ಬರಲು ಸಾಧ್ಯ.ಆಗವನಿಗೆ ತಂದೆ ಹೇಳಿರುವ ಮಾತಿನ ಮಹತ್ವದ ಅರಿವಾಯಿತು. ಹೌದು ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎನ್ನುವ ಹಿರಿಯರ ಮಾತು ಸುಳ್ಳಲ್ಲ. ಅಣ್ಣ ಕಷ್ಟಪಟ್ಟು ದುಡಿದು ಆರಾಮದ ಜೀವನ ಸಾಗಿಸುತಿದ್ದಾನೆ. ಆದರೆ ನಾನು ಇಷ್ಟು ವರುಷ ತಿರುಗಾಡಿಕೊಂಡೆ ತಿಂದು ಇಷ್ಟು ವರ್ಷದ ಜೀವನ ಹಾಳುಮಾಡಿಕೊಂಡೆ. ನನ್ನನ್ನೇ ನಂಬಿ ಬಂದಿರುವ ಹೆಂಡತಿ ಬೇರೆಯವರ ಮುಂದೆ ಕೈಚಾಚುವಂತೆ ಮಾಡಿದೆ. ಛೇ ಮುಂದೆ ಹೀಗಾಗಬಾರದೆಂದು ದೃಢನಿರ್ಧಾರ ಮಾಡಿದ.ದುಡಿಯಲು ಪ್ರಾರಂಭಿಸಿ ಒಳ್ಳೆಯ ಜೀವನ ನಡೆಸುತ್ತ ಹೆಂಡತಿ ಮಕ್ಕಳೊಂದಿಗೆ ಸಂತೋಷದಿಂದ ದಿನಕಳೆದ.


ಸರಿತಾ ಅಂಬರೀಷ್ ಕುತ್ಪಾಡಿ✍🏻


ಕತೆ ೦೩

ಶ್ರಮವಿರದ ಬಾಳು ಬರೀ ಗೋಳು

----------------------------------------

ಸೋಮ ಮೊದಲಿನಿಂದಲೂ ಸೋಮಾರಿ ಸ್ವಭಾವದವನು. ಹಳ್ಳಿಯಲ್ಲಿ ಗೆಳೆಯರೊಂದಿಗೆ ಅಡ್ಡಾಡಿ ಸಮಯ ಕಳೆಯುತ್ತಿದ್ದನು.ತಂದೆ ದುಡಿದು ಹಾಕಿದ್ದು ತಾಯಿ ರುಚಿ ರುಚಿಯಾಗಿ ಮಾಡಿ ಬಡಿಸಿದ ಅಡಿಗೆ ಉಂಡು ,ಗಾಢವಾಗಿ ನಿದ್ದೆ ಮಾಡುವುದು,ಸ್ನೇಹಿತರೊಡನೆ ತಿರುಗಾಟ ಮಾಡುವುದು ,ಹಳ್ಳಿಯ ದೊಡ್ಡ ಅರಳಿ ಮರದ ಕಟ್ಟೆಯಲ್ಲಿ ನಿತ್ಯ ಸಂಜೆಯಿಂದ ಕತ್ತಲಾಗುವವರೆಗೆ ಕಾಡು ಹರಟೆ ಹೊಡೆಯುವುದು ಅವನ ದಿನಚರಿಯಾಗಿತ್ತು. ಅತ್ತ ಸರಿಯಾಗಿ ವಿದ್ಯಾಭ್ಯಾಸದತ್ತಲೂ ಗಮನಕೊಡದೇ ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾಗಿ ಅಲ್ಲಿಗೇ ತನ್ನ ಕಲಿಕೆಗೆ ಪೂರ್ಣವಿರಾಮ ಹಾಕಿಬಿಟ್ಟಿದ್ದನು ತಂದೆಗೆ ಪೂರ್ವಾಜಿತವಾಗಿ ಬಂದಿರುವ ಅಡಿಕೆ ತೆಂಗಿನ ತೋಟ ಹೊಲ ಗದ್ದೆಗಳಿದ್ದು  ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು.ತಮ್ಮದೇ ಆದ ಸ್ವಂತ ಮನೆಯಿದ್ದು ಜೀವನದ ದಾರಿ ಸುಗಮವಾಗಿತ್ತು.ತಂದೆ ತಾಯಿ ಅಷ್ಟು ಕಷ್ಟ ಪಡುವುದು ನೋಡಿ ಒಮ್ಮೆಯೂ ಅವನಿಗೆ ಸಹಾಯ ಮಾಡಬೇಕು ಎಂದು ಅನ್ನಿಸುತ್ತಿರಲಿಲ್ಲ..ಬುದ್ದಿ ಹೇಳಲು ಹೋದ ತಂದೆ ತಾಯಿಯ ಮೇಲೆ ಮುನಿಸು ತೋರಿಸುತ್ತಾ ಆ ದಿನ ರಾತ್ರಿ ಮನೆಗೆ ಬರುತ್ತಲೇ ಇರಲಿಲ್ಲ.

ಅಂತ ಸಮಯದಲ್ಲಿ ಇವರು ಗಾಬರಿಗೊಂಡು ಇರುವ ಒಬ್ಬ ಮಗ ಹೇಗಾದರೂ ಇರಲಿ ಕಣ್ಣ ಮುಂದೆಯೇ ಇರಲಿ ಎಂದು ಗಲಿಬಿಲಿ ಪಟ್ಟುಕೊಂಡು ಸುಮ್ಮನಾಗಿ ಬಿಡುತ್ತಿದ್ದರು.


ದಿನಗಳು ಹೀಗೆ ಉರುಳುತ್ತಿರಲು ಸೋಮನಿಗೆ ಮದುವೆಯನ್ನು ಮಾಡಬೇಕೆಂದು ಹೆಣ್ಣನ್ನು ಹುಡುಕತೊಡಗಿದರು ಆದರೆ ಕೆಲಸ ಬೊಗಸೆ ಇಲ್ಲದ ಸೋಮನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ ಹೀಗಿರುವಾಗ ಸೋಮನ ತಂದೆಯೂ ಸಹ ಅನಾರೋಗ್ಯದಿಂದ ಹಾಸಿಗೆ ಹಿಡಿದರು.

ತಂದೆಯ ಶೂಶ್ರೂಶೆ, ಔಷಧಿ ಸಂಸಾರದ ಖರ್ಚುಗಳು ಹೀಗೆ ದಿನದಿನಕ್ಕೆ ವೆಚ್ಚ ವಾಗುತ್ತಿತ್ತೇ ಹೊರತು ದುಡಿಮೆ ಇರಲಿಲ್ಲ.


ಹೊಲ ಗದ್ದೆ ನೋಡಿಕೊಳ್ಳುವವರಿಲ್ಲದೇ ಬೆಳೆಯು ಹಾಳಾಗತೊಡಗಿತು.ಹಾಗೆಂದು ಒಮ್ಮೆಯೂ ಸೋಮ ತೋಟದ ಕಡೆಗೆ ಮುಖ ಹಾಕಲಿಲ್ಲ. ಈ ನಡುವೆ ಚಿಕಿತ್ಸೆ ಫಲಿಸದೇ ತಂದೆಯು ಕೊನೆಯುಸಿರೆಳೆದರು.ಸೋಮ ತಾಯಿಯ ಮಾತಿಗೂ ಬೆಲೆ ಕೊಡದೇ ಇದ್ದ ಹೊಲ ಗದ್ದೆಯನ್ನು ಮಾರುತ್ತಾ ಬಂದ ಜೊತೆಗೆ ಜೂಜು ಆಡಲೂ ಕಲಿತಿದ್ದರಿಂದ  ಆಸ್ತಿ ಒಂದೊಂದಾಗಿ ಕರಾಗುತ್ತಾ ಬಂತು. ಕೊನೆಗೆ ಮನೆಯನ್ನು ಕೂಡಾ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿತು.ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು ಎಂಬುದಕ್ಕೆ ಸೋಮ ಒಳ್ಳೆಯ ಉದಾಹರಣೆಯಾದ



ಉಷಾ ದಿನೇಶ್, ಶಿವಮೊಗ್ಗ


ಕತೆ ೦೪ 

ನೀತಿ ಕಥೆ : ವಿಷಯ: ಕೂತು ತಿಂದರೆ ಕುಡಿಕೆ ಹೊನ್ನು  ಸಾಲದು

ಗಾದೆಗಳು ಹಿರಿಯರ ಅನುಭವದ ನುಡಿಗಳು ಅಂಥದೊಂದು ಗಾದೆ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎನ್ನುವುದು ಅಂದರೆ

ಹಿರಿಯರು ಮಾಡಿದ್ದ ಹಣವನ್ನು ಖರ್ಚು ಮಾಡುತ್ತ ದುಡಿಯದೇ ಇರಬಾರದು


ಅಂಥದ್ದೊಂದು ಕಥೆ ನಮ್ಮ ಸವಿತ ಮತ್ತು ರೇವತಿಯದು. ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು. ಒಂದೇ ತರಗತಿ ಅವರಾಗಿದ್ದರು. ಇಬ್ಬರೂ ಮಧ್ಯಮವರ್ಗದ ಕುಟುಂಬದವರು ಆದರೂ ಕೂಡ ರೇವತಿ ಮನೆಯವರು ಹಾಗೂ ರೇವತಿ

ಒಂದು ತರಹದ ಒಣ ಜಂಭದ ಆಡಂಬರದ ಜೀವನ ನಡೆಸುತ್ತಿದ್ದರು.

ಸರಿಯುವುದೇ ತಂದೆ ದೊಡ್ಡ ಹೋಟೆಲ್ ನಡೆಸುತ್ತಿದ್ದರು.


ಸವಿತಾ ಮನೆಯವರ ಹಾಗಲ್ಲ, ಚಿಕ್ಕ ಸಾಧಾರಣದ ಹೋಟೆಲ್ ನಡೆಸುತ್ತಿದ್ದರು.

ಸವಿತಾ ಮನೆಯವರು ಸರಳತೆಯಿಂದ ತಾವು ದುಡಿದ ಹಣವನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾಗಬಹುದೆಂದು ಕೂಡಿಡುತ್ತಿದ್ದರು. ಸವಿತಾಳ ತಂದೆ-ತಾಯಿ ಹೋಟೆಲಲ್ಲಿ ದುಡಿಯುತ್ತಿದ್ದರು. ಇದ್ದ ಸವಿತಾಳು ಕೂಡ ಅಕ್ಕಪಕ್ಕದ ಮನೆಯವರಿಗೆ

ಸಹಾಯ ಮಾಡುತ್ತಿದ್ದಳು. ಅಂದರೆ ಏನಾದರೂ ತಂದುಕೊಡುವುದು. ಒಂದು ಮುದುಕ ಮುದುಕಿ ಮನೆಗೆ ಅಡುಗೆಗೆ ಹೋಗೋದು.

ಮತ್ತೆ ಮನೆಗೆ ಬಂದು ಮನೆ ಕೆಲಸ ಮಾಡಲು ಅಮ್ಮನಿಗೆ ಸಹಾಯ ಮಾಡುವುದು

.

     ಹೀಗೆ ರೇವತಿಯ ಆಡಂಬರದ ಜೀವನ ನಡೆಸುತ್ತಿದ್ದಳು. ಸವಿತಾ ಸರಳತೆಯಲ್ಲಿ ಚೆನ್ನಾಗಿ ದುಡಿದು ಸಮಯ ವ್ಯರ್ಥ ಮಾಡದೇ ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಓದಿ, ವಿದ್ಯಾಭ್ಯಾಸವನ್ನು ಕೂಡ ಚೆನ್ನಾಗಿ ಮಾಡುತ್ತಿದ್ದಳು.

         ಹೀಗಿರಲು ಕರೋನ ಎಂಬ ಮಹಾಮಾರಿ ಯಿಂದಾಗಿ ಎಲ್ಲ ಹೋಟೆಲ್ಗಳು ಮುಚ್ಚಿಕೊಂಡು ರೇವತಿ ಅವರ ಅಪ್ಪನ ಹೋಟೆಲ್ ಕೂಡ ಮುಚ್ಚಿದರು.

ರೇವತಿಯ ಮನೆಯವರು ಜನರೊಂದಿಗೆ ಅಷ್ಟೊಂದು ಬೆರೆತಿರಲಿಲ್ಲ.

ಹಾಗಾಗಿ ರೇವತಿಯ ಮನೆಯವರು ದೇಶಕ್ಕೆ ಕರೋನ ಬಂದ್ಮೇಲೆ ದಿನದಿಂದ ದಿನಕ್ಕೆ ಆರ್ಥಿಕತೆಯಲ್ಲಿ ಕುಸಿಯುತ್ತ ಹೋದರು.


ಇತ್ತ ಸವಿತಾಳ ತಂದೆ ಕೂಡ ಹೋಟೆಲ್ ಮುಚ್ಚಬೇಕಾಗಿತ್ತು . ಆದರೆ ಪಕ್ಕದಮನೆಯ  ಮುದುಕ ಮುದುಕಿಯು ಸವಿತಾಳ ಮೇಲಿನ ಪ್ರೀತಿಯಿಂದ ಬೇರೆ ಬೇರೆ ಕಡೆ ಅಡಿಗೆಗೆ ಇವರು ಆಹಾರ ತಯಾರಿಸಿ ಸರಬರಾಜು ಮಾಡುವಂತೆ ಅಣುವು ಮಾಡಿಕೊಟ್ಟರು. ಇದರಿಂದಾಗಿ ಸವಿತ ಮನೆಯವರು ಕರೋನದಿಂದ ಯಾವುದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿಲ್ಲ.



      ಆದರೆ ರೇವತಿ ಮನೆಯವರು ಸೋಮಾರಿಗಳು ಕೂತು ತಿನ್ನುತ್ತಾ, ಆರ್ಥಿಕ ಸಂಕಷ್ಟಕ್ಕೆ ಒಳಗಾದರು.

          ಈ ಕತೆಯಿಂದ ತಿಳಿಯಬೇಕಾದ ನೀತಿ ಎಂದರೆ ನಾವು ದುಡಿದ ಹಣವನ್ನು ಎಲ್ಲಾ ಖರ್ಚು ಮಾಡದೆ ನಾಳಿನ ಜೀವನಕ್ಕಾಗಿ ಸ್ವಲ್ಪವಾದರೂ ಮುಡಿಪಾಗಿಡಬೇಕು.

ಇದರಿಂದ ನಮ್ಮ ಭವಿಷ್ಯಕ್ಕೆ ಒಳ್ಳೆಯದು.

ಎಂ ರಮಿತಾ ಎ ಶೆಟ್ಟಿ ,ಬೈಂದೂರು ಪಡುವರಿ

ಕತೆ ೦೫

ಶೀರ್ಷಿಕೆ: ಸೋಮಾರಿತನ ಒಳ್ಳೆಯದಲ್ಲ


ಶ್ರೀರಾಮನಗರ ಎನ್ನುವ ಒಂದು ಗ್ರಾಮ. ಅಲ್ಲಿ ಕೈಲಾಸ್ ಎನ್ನುವ ಒಬ್ಬ ಹುಡುಗ. ಅವನ ಅಪ್ಪ ಒಬ್ಬ ಎಣ್ಣೆ ವ್ಯಾಪಾರಿ. ಅವನು ಅಗರ್ಭ ಶ್ರೀಮಂತ. ಕೇಳಿದನ್ನೆಲ್ಲ ಅವನು ಮಗನಿಗೆ ಕೊಡುತ್ತಿದ್ದ. ಅವರಿಗೆ ದುಡ್ಡಿನ ಕೊರತೆ ಇರಲಿಲ್ಲ. ಇದರಿಂದ ಮಗನಿಗೆ ಸೋಮಾರಿತನ ತಲೆಗೆ ಹತ್ತಿತ್ತು. ಕೈಲಾಸನ ಅಪ್ಪ ಅವನನ್ನು ಒಬ್ಬ ವೈದ್ಯನನ್ನಾಗಿ ಮಾಡಬೇಕೆಂದಿದ್ದ. ಆದ ಕಾರಣ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿದ. ಕೈಲಾಸನು ಎಂ.ಬಿ.ಬಿ.ಎಸ್. ಪದವಿಧರನಾದ. ಆದರೆ ಅವನು ವೈದ್ಯಕೀಯ ಅಭ್ಯಾಸಕ್ಕೆ ಹೋಗುತ್ತಿರಲಿಲ್ಲ. ಇದನ್ನು ನೋಡಿದ ಅವನ ಅಪ್ಪ ಕೇಳಿದರು, "ಮಗು, ಕೈಲಾಸ್ ನೀನು ವೈದ್ಯಕೀಯ ಅಭ್ಯಾಸ ಏಕೆ ಮಾಡುತ್ತಿಲ್ಲ? ನಿನಗೆ ವೈದ್ಯನಾಗಲು ಇಷ್ಟವಿಲ್ಲವೇ?" "ಅಪ್ಪ, ನನ್ನ ಜೀವನೋಪಾಯಕ್ಕೆ ನೀವು ದುಡಿದು ಕೂಡಿಟ್ಟಿರುವ ಹಣವೇ ಸಾಕಾಗುವುದೆಂದ ಮೇಲೆ ನಾನು ವೈದ್ಯನಾಗುವ ಅಗತ್ಯವೇನಿದೆ? ಕೈಲಾಸನೆಂದ. 


ಅದಕ್ಕೆ ಅಪ್ಪನು ಹೀಗೆಂದ, "ಮಗನೇ, 'ಕೂತು ತಿಂದರೆ ಕುಡಿಕೆ ಹೊನ್ನು ಸಾಲದು' ಎಂಬ ಗಾದೆ ಮಾತಿದೆ. ಕೈಯಲ್ಲಿ ಶಕ್ತಿಯಿರುವಾಗ ದುಡಿಯುವುದನ್ನು ಬಿಟ್ಟು ಸುಮ್ಮನೆ ಕೂತರೆ ಮುಂದೆ ಎಲ್ಲ ಹಣ ಖಾಲಿಯಾದಾಗ ನಮಗೆ ದುಡಿಯಲ್ಲೇ ಬೇಕಾಗುತ್ತದೆ. ಆದ ಕಾರಣ ನಾವು ಸುಮ್ಮನೆ ಯಾವ ಕೆಲಸವನ್ನು ಮಾಡದೆ ಕೂತುಕೊಳ್ಳಬಾರದು". ಕೈಲಾಸ್ ತನ್ನ ಅಪ್ಪನ ಮಾತಿಗೆ ಬೆಲೆಕೊಡಲಿಲ್ಲ. ಒಂದು ದಿನ ಕೈಲಾಸನ ಅಪ್ಪ ಹೃದಯಾಘಾತದಿಂದ ತಿರಿಕೊಂಡರು. ಆದರೆ ಅವನ ಬಳಿ ಅಪ್ಪ ಅವನಿಗಾಗ ಕೂಡಿಟ್ಟಿದ ಸ್ವಲ್ಪ ಹಣವಿತ್ತು. ಕೈಲಾಸ್ ಆ ಹಣದಲ್ಲೇ ತನ್ನ ಜೀವನ ಸಾಗಬಹುದೆಂದು ಅಂದುಕೊಂಡ. ಹೀಗೆ ಆ ಹಣವೆಲ್ಲ ಖಾಲಿಯಾದಾಗ ಕೈಲಾಸನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವನಿಗೆ ಇನ್ನು ಜೀವನವನ್ನು ಹೇಗೆ ನಡೆಸುವುದೆಂಬ ಪ್ರಶ್ನೆ ಕಾಡತೊಡಗಿತು. 


ಈಗ ಅವನಿಗೆ ತನ್ನ ಅಪ್ಪನ ಮಾತಿನ ಅರ್ಥವಾಯಿತು. ಅವನು ಮರುದಿನವೇ ಒಂದು ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿದ್ದ ಜಾಗಕ್ಕೆ ಹೋದ. ಅಲ್ಲಿನ ಮಾಲೀಕನ ಬಳಿ ತನಗೊಂದು ಕೆಲಸವನ್ನು ಕೊಡಲು ಕೇಳಿಕೊಂಡ. ಮಾಲೀಕನು ಅದಕ್ಕೆ ಒಪ್ಪಿ ಕೈಲಾಸನಿಗೆ ಒಂದು ಕೆಲಸವನ್ನು ನೀಡಿದನು. ಕೈಲಾಸನಿಗೆ ಪ್ರತಿದಿನ ೨೦೦ ರೂಪಾಯಿಗಳಷ್ಟು ಕೂಲಿ ಸಿಗುತ್ತಿತ್ತು. ಆದರೆ ಅಷ್ಟು ಕಡಿಮೆ ಹಣದಿಂದ ಅವನಿಗೆ ವೈದ್ಯಕೀಯ ಅಭ್ಯಾಸವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ವೈದ್ಯನಾಗುವ ಕನಸ್ಸನ್ನು ಬಿಟ್ಟುಬಿಟ್ಟನು. ಹೀಗಿರುವಾಗ ಅವನಿಗೆ ಒಂದು ಕೋಚಿಂಗ್ ಸೆಂಟರ್ ಬಗ್ಗೆ ತಿಳಿಯಿತು. ಅಲ್ಲಿ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಐ.ಎ.ಎಸ್., ಯು.ಪಿ.ಎಸ್.ಸಿ., ಮುಂತಾದ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದರು. ಕೈಲಾಸನು ಆ ಕೋಚಿಂಗ್ ಸೆಂಟರ್ಗೆ ದಿನದ ಕೂಲಿ ಮುಗಿಸಿ ಹೋಗಿತ್ತಿದ್ದ. ಕಠಿಣ ಪರಿಶ್ರಮದಿಂದ ಆತ ಐ.ಎ.ಎಸ್. ಪರೀಕ್ಷೆಗೆ ತರಬೇತಿ ಪಡೆದುಕೊಂಡು ಐ.ಎ.ಎಸ್ ಸಂದರ್ಶನಕ್ಕೆ ಹಾಜರಾದನು. ಸಂದರ್ಶನದಲ್ಲಿ ಉತ್ತೀರ್ಣನಾಗಿ ಒಬ್ಬ ಐ.ಎ.ಎಸ್ ಅಧಿಕಾರಿಯಾದನು. ಮಿತ್ರರೇ ಇದರಿಂದ ನಮಗೆ ತಿಳಿಯುವುದೇನೆಂದರೆ ನಾವು ಸೋಮಾರಿತನದಿಂದ ನಮ್ಮ ಅಪ್ಪ ಅಥವಾ ಅಜ್ಜ ಮಾಡಿಹೋದ ಆಸ್ತಿಯನ್ನು ಖರ್ಚುಮಾಡಿದರೆ, ಆ ಹಣವು ಬೇಗ ಖಾಲಿಯಾಗುತ್ತದೆ. ಆದ ಕಾರಣ ನಾವು ನಮ್ಮ ಸ್ವಂತ ಪರಿಶ್ರಮದಿಂದ  ದುಡಿಯಬೇಕು. ಇದನ್ನೇ ನಮ್ಮ ಹಿಂದಿನವರು "ಕೂತು ತಿಂದರೆ ಕುಡಿಕೆ ಹೊನ್ನು ಸಾಲಲ್ಲ" ಎಂಬ ಗಾದೆ ಮಾತಿನ ಮುಖಾಂತರ ನಮಗೆ ತಿಳಿಸಿದ್ದಾರೆ. 


ನೀತಿ: ಸೋಮಾರಿತನ ಒಳ್ಳೆಯದಲ್ಲ. ಪರಿಶ್ರಮದ ಫಲ ಯಾವಾಗಲೂ ಸಿಹಿಯಾಗಿರುತ್ತದೆ. 


ಅರವಿಂದ ಬಾಯಿರಿ, 

ಎಂಟನೇ ತರಗತಿ, 

ಕಾರ್ಮೆಲ್ ಕಾನ್ವೆಙಟ್ ಸ್ಕೂಲ್, 

ಕಾರ್ಮೆಲಾರಾಂ, ಬೆಂಗಳೂರು - ೩೫.


ಕತೆ ೦೬ 

ಶೀರ್ಷಿಕೆ : ಮನಮುಟ್ಟಿದ ಅಮ್ಮನ ಮಾತು

================================

ಪರೀತ ಎಂಬ ಊರಿನಲ್ಲಿ ಸೀತಾ ಎಂಬ ಬಾಲಕಿ ಇದ್ದಳು. ಅವಳು ಚಿಕ್ಕವಳಿದ್ದಾಗಲೇ ಆಕೆಯ ತಂದೆ ತೀರಿ ಹೋಗಿದ್ದರು. ಸೀತಾಳ ಅಮ್ಮನಿಗೆ ‌ ಮಗಳನ್ನು ಸಾಕಲು ಕಷ್ಟವಾದರೂ ಅವಳಿಗೆ ಸ್ವಲ್ಪವೂ ತೊಂದರೆ ಆಗದ ಹಾಗೆ, ಯಾವುದರಲ್ಲೂ ಕೊರತೆ ಬಾರದ ಹಾಗೇ ನೋಡಿಕೊಳ್ಳುತ್ತಿದ್ದರು.


ಇರುವ ಒಬ್ಬ ಮಗಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿಂದ ಪಟ್ಟಣಕ್ಕೆ ಬಂದು ಒಂದು ಖಾಸಗಿ ಶಾಲೆಗೆ ಸೇರಿಸಿದ್ದರು. ಒಂದು ದಿನ ಸೀತಾಳ ತಾಯಿಗೆ ಇದ್ದಕ್ಕಿದ್ದ ಹಾಗೆ ಹುಷಾರು ತಪ್ಪಿತು. ಅದಕ್ಕಾಗಿ ಆಕೆ ಅಮ್ಮನನ್ನು ನೋಡಿಕೊಳ್ಳಲು ಶಾಲೆಗೆ ಎರೆಡು ದಿನ ರಜೆ ಹಾಕಿದಳು. ಅದೇ ಸಮಯದಲ್ಲಿಅವಳಿಗೆ ಪರೀಕ್ಷೆಗಳು ಶುರುವಾಗಿದ್ದವು. ಅವಳಿಗೆ ಯಾರು ಸಹ ಹಿಂದಿನ ತರಗತಿಯಲ್ಲಿನಡೆದ ಪಾಠಗಳನ್ನು ಬರೆದುಕೊಳ್ಳಲು ಪಠ್ಯ ‌ ಪುಸ್ತಕ ಕೊಡಲಿಲ್ಲ. ಅವಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಿದ್ದಳು. ಇದರಿಂದಾಗಿ ಅವಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು.


ಸೀತಾ ‌ ಇದಕ್ಕೆಲ್ಲಾ ಬೇಸರ ಮಾಡಿಕೊಳ್ಳದೆ ಅಂಕಪಟ್ಟಿಯನ್ನು ಅಮ್ಮನಿಗೆ ತೋರಿಸಿದಾಗ ಅವಳ ಅಮ್ಮ ಪದ್ಮಾವತಿ ಯಾಕಿಷ್ಟು ಕಡಿಮೆ ಅಂಕ ಬಂದಿದೆ? ನೀನು ನೂರಕ್ಕೆ ನೂರು ಅಂಕ ತೆಗೆಯಬೇಕೆಂದು  ನಾನು ಹೇಳುವುದಿಲ್ಲ. ಆದರೆ ನೀನು ಶ್ರಮ ಹಾಕಿದಷ್ಟು ಅಂಕ ಬರುತ್ತದೆಯಲ್ಲವೇ? ಎಂದರು. ಅದಕ್ಕೆ ಸೀತಾ ಹೌದಮ್ಮ ನೀವು ಹೇಳುವುದೇನೋ ಸರಿ. ಆದರೆ ನಿಮಗೆ ಹುಷಾರಿಲ್ಲದ ಸಮಯದಲ್ಲಿ ನಾನು ರಜೆ ಹಾಕಿದ್ದೆನಲ್ಲ. ಅಂದು ನಡೆದ ಪಾಠದ ಪಠ್ಯವನ್ನು ಬರೆದುಕೊಳ್ಳಲು ನನಗೆ ‌ ಪುಸ್ತಕವನ್ನು ಯಾರೂ ನೀಡಲಿಲ್ಲ. ನಾನೇನು ಮಾಡಲಿ ಅಮ್ಮ ಎಂದಳು. ಅದಕ್ಕೆ ಅಮ್ಮ ಅವರು ಯಾರೂ ಪುಸ್ತಕ ಕೊಡಲಿಲ್ಲ ಎಂದು ಹೀಗೆ ನೀನು ನೆಪ ಹೇಳಿ ಕೂರಬಾರದು. ನಿಮ್ಮ ಟೀಚರ್‌ಗೆ ಹೇಳಿ ಅವರಿಂದ ಹೇಳಿಸಿ ಪಡೆಯಬಹುದಿತ್ತಲ್ವ? ಟೀಚರ್‌ಗೆ ಕೇಳಲು ಭಯವಾದರೆ ನನ್ನನ್ನು ಕೇಳಬಹುದಿತ್ತು. ನಾನು ಬಂದು ನಿಮ್ಮ ಶಿಕ್ಷಕರಿಗೆ ಹೇಳುತ್ತಿದ್ದೆನಲ್ಲಾ ಎಂದರು.ಅದಕ್ಕೆ ಸೀತಾ ಹೌದಲ್ಲವೇ ಅಮ್ಮ ನನಗಿದು ಹೊಳೆಯಲೇ ಇಲ್ಲ ಎಂದಳು. ಅದಕ್ಕೆ ತಾಯಿ ಇದು ಕೇವಲ ಓದಿಗೆ ಮಾತ್ರ ಸೀಮಿತವಾಗಬಾರದು. ಜೀವನದಲ್ಲೂ ಅಷ್ಟೆ ಇದನ್ನು ರೂಢಿಸಿಕೊಳ್ಳಬೇಕು ಯಾರು ಕೂಡ ನೀನು ಮುಂದುವರೆಯಲು ಆಸರೆ ನೀಡುವುದಿಲ್ಲ ಮತ್ತು ಸಹಾಯ ಮಾಡುವುದಿಲ್ಲ. ಅವರಿವರು ಕೊಡುವರೆಂದು ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬಂತೆ ನಾವೇ ಬುದ್ಧಿ ಉಪಯೋಗಿಸಿ ಪರಿಹಾರ ಕಂಡುಕೊಳ್ಳಬೇಕು. ಈ ಮಾತನ್ನು ಯಾವಾಗಲೂ ನೆನಪಿಟ್ಟುಕೋ ಮಗಳೇ ಎಂದರು. ಸೀತಾ ‌ ಅಂದಿನಿಂದ ನೆಪ ಹೇಳಿ ತಪ್ಪಿಸಿಕೊಳ್ಳುವುದನ್ನು ಬಿಟ್ಟು ಉತ್ತಮ ವಿದ್ಯಾರ್ಥಿನಿಯಾದಳು. ಮುಂದೆ ಪರೀಕ್ಷೆಯಲ್ಲಿ ಯಾರ ಸಹಾಯವು ಇಲ್ಲದೇ ತರಗತಿಗೆ ಮೊದಲನೇ ಸ್ಥಾನ ಬಂದಳು. ನಂತರ ಸೀತಾ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ, ಮುಂದೆ ತನ್ನ ಕಾಲಮೇಲೆ ತಾನೇ ನಿಂತುಕೊಂಡು ಕೆಲಸ ಮಾಡುತ್ತಾ ತನ್ನ ತಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಂಡಳು.


*ನೀತಿ : ನೆಪ ಹೇಳಿಕೊಂಡು ಕುಳಿತರೆ ಮುಂದೆ ಯಾವ ಕೆಲಸವು ಆಗುವುದಿಲ್ಲ ಬದಲಾಗಿ ತಾವೆ ಬುದ್ಧಿ ಉಪಯೋಗಿಸ ಬೇಕೆನ್ನುವ ಅರ್ಥ*


✍️ ಪುಷ್ಪ ಪ್ರಸಾದ್ ಉಡುಪಿ


ಕತೆ ೦೭ : ಸೋಮಾರಿ.


ರಾಮು ಹಾಗೂ ಶಾಮು ಇಬ್ಬರು ಆತ್ಮೀಯ ಗೆಳೆಯರು.ಅವರಿಗೆ ಸೋಮಾರಿತನ ಹೆಗಲೇರಿ ಕುಳಿತಿತ್ತು.ಮನೆಯವರು ಎಷ್ಟು ಹೇಳಿದರೂ ಕೇಳುತ್ತಾ ಇರಲಿಲ್ಲ.ಮನೆಯವರ ವಿಚಾರವನ್ನು ತಳ್ಳಿ ಬೀದಿ ಬೀದಿ ಅಲೆದು ಪುಂಡಪೋಕರಿಯಂತೆ ತಿರುಗಾಡುತ್ತಿದ್ದರು.ಎಷ್ಟೇ ಆದರೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಇಂದಲ್ಲ ನಾಳೆ ಸರಿಹೋಗಬಹುದು ಎಂದು ಕುಳಿತರು.ಹಣವಿದ್ದರೆ ಮಾತ್ರ ಜನರು ಮಾತಾನಾಡಿಸುವರು ಎಂದು ತಿಳಿದಿದ್ದರು.ಅವರು ತಮ್ಮ ಜೀವನವನ್ನು ಸುಲಭವಾಗಿ ಸೋಮಾರಿತನದಿಂದನೇ ಕಳೆಯುತ್ತಿದ್ದರು.ಒಂದು ದಿನ ಕಳ್ಳತನ ಮಾಡಿ ದುಡ್ಡು ಮಾಡಲು ಹೋದಾಗ ರಾಮ ಶಾಮ ಸಿಕ್ಕಿಬಿದ್ದರು.ಇದು ಊರಿಗೆ ವಿಷಯ ತಿಳಿಯಿತು.ತಂದೆ ತಾಯಿ ತುಂಬಾ ಕಣ್ಣೀರು ಹಾಕಿದರು.ಮಕ್ಕಳನ್ನು ಬಿಡಿಸಿ ಕೊಳ್ಳಲು ಬಹಳ ಒದ್ದಾಡಿದರು.ಹೇಗೋ ದೇವರ ದಯೆಯಿಂದ ಬಿಡುಗಡೆಯಾದರು.ಆಗ ತಮ್ಮ ತಪ್ಪಿನ ಅರಿವಾಯಿತು.ಕಾರಣ ತಂದೆ ತಾಯಿ ನೋವು ಪಟ್ಟು ತಮ್ಮನ್ನು ಬಿಡುಗಡೆ ಗೊಳಿಸಿದರು.ಎಂದು ನೋವುಂಟು ಮಾಡಿತು.ಹಾಗೆಯೇ ವಿದ್ಯಾಭ್ಯಾಸವ ಕಲಿಯದೇ ಕೆಲಸವು ಸಿಗದೇ ಒದ್ದಾಡಿದರು.

ಮುಂದೊಂದು ದಿನ ಸೋಮಾರಿತನದಿಂದ ಅವರು ಮಾಡಿದ ಪಾಪ ಕರ್ಮವ ನೆನೆದು ಅಳುತ್ತಲೇ ಮುಂದೆ ನಡೆದು ಹೋಗುವಾಗ ಕೃಷಿಯಲ್ಲಿ  ಬೇಸಾಯ ಮಾಡಿ ಜೀವನ ಸಾಗಿಸುವ ಉಪಾಯ ಹೊಂದಿದರು.ಫಸಲು ಕೂಡಾ ಚೆನ್ನಾಗಿ ಬಂತು.ಹಾಗಾಗಿ ಜೀವನದಲ್ಲಿ ಸೋಮಾರಿತನ ಮತ್ತೆ ಹೇಗಲೇರ ಬಾರದು ತಿಳಿದು ಕೂತು ತಿಂದರು ಕುಡಿಕೆ ಹೊನ್ನು ಸಾಲದು ಎಂದು ಹೇಳಿದಂತೆ ತಮ್ಮ ಸೋಮಾರಿತನ ಕೂಡಾ ಬಿಟ್ಟು ಹೊರಟುಹೋಯಿತು.ಜೀವನದಲ್ಲಿ ಸಾಧನೆಯ ಮಾಡಿ ಮುಂದೆ ಒಳ್ಳೆಯ ದುಡಿಮೆಯ ವ್ಯಕ್ತಿಯಾದರು.


ಯಶೋದ.ಗಾಣಿಗ, ಗೃಹಿಣಿ 🙏

ಕತೆ : ೦೮

ಶೀರ್ಷಿಕೆ : ಇರುವೆಗಳ ಚಾತುರ್ಯ 

ಅದೊಂದು ಮರ. ದಟ್ಟಡವಿಯ ನಡುವೆ ಇದ್ದ ಆ ಮರ ತುಂಬಾ ವಿಶಾಲವಾಗಿತ್ತು. ಸಹಜವಾಗಿಯೇ ವರ್ಷಪೂರ್ತಿ ತುಂಬಾ ಹಣ್ಣುಗಳನ್ನು ಬಿಡುತ್ತಿತ್ತು. ಆದ್ದರಿಂದ ಎಲ್ಲ ತರಹದ ಪಶುಪಕ್ಷಿಗಳು ಆ ಮರದಲ್ಲೇ ಮನೆ ಮಾಡಿಕೊಂಡು ವಾಸಿಸುತ್ತಿದ್ದವು. ಎಷ್ಟೇ ಜೋರಾದ ಗಾಳಿ ಬಂದರೂ, ಕೊಂಬೆಗಳು ಸ್ವಲ್ಪ ಜೋರಾಗಿ ಅಲುಗಾಡುತ್ತಿತ್ತೇ ಹೊರತು, ಆಳವಾಗಿದ್ದ ಬೇರುಗಳು ಆ ಮರವನ್ನು ಬುಡಮೇಲು ಮಾಡದಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದವು. ಎಂತಹ ಬಿಸಿಲ ಝಳವೂ ಸಹ ಆ ಮರದ ಕೊಂಬೆಗಳ ಮಧ್ಯೆ ಪಕ್ಷಿಯ ಗೂಡುಗಳಲ್ಲಿದ್ದ ಪುಟ್ಟ ಮರಿಗಳಿಗೆ ಬಾಧೆ ನೀಡಲು ಸಾಧ್ಯವಿರಲಿಲ್ಲ. ಬಿರುಸಾದ ಮಳೆ ಬಂದರೂ ದೊಡ್ಡ ದೊಡ್ಡ ಹನಿಗಳು ಆ ಮರದ ಎಲೆ, ಕೊಂಬೆಗಳ ಮೇಲೆ ಬಿದ್ದು, ನಿಧಾನವಾಗಿ ಹರಿಯುತ್ತಾ ಕೆಳ ಜಾರುತ್ತಿತ್ತು.  ಕಿಲೋಮೀಟರ್ ನಷ್ಟು ವಿಸ್ತೀರ್ಣ ಹೊಂದಿದ ಆ ವಿಶಾಲ ಮರ ಎಂದೂ ಬರಿದಾಗಿರಲಿಲ್ಲ.


ಇಂತಹ ದೊಡ್ಡ ಮರದ ಬುಡದಲ್ಲಿ ಒಂದು ಇರುವೆ ಗೂಡು ಸಹ ಇತ್ತು. ಲಕ್ಷಾಂತರ ಸಣ್ಣ ದೊಡ್ಡ ಇರುವೆಗಳು ಅಲ್ಲಿ ವಾಸವಾಗಿದ್ದವು.  ಇರುವೆಗಳಲ್ಲಿರುವ ಸಹಜ ಪ್ರವೃತ್ತಿಯಂತೆ ಆ ಇರುವೆಗಳು ಯಾವಾಗಲೂ ಬೇರೆ ಬೇರೆ ಕಡೆಗಳಿಗೆ ಹೋಗಿ ಆಹಾರವನ್ನು ಒಟ್ಟುಗೂಡಿಸಿ ತಂದು ತಮ್ಮ ಗೂಡಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತಿದ್ದವು. ಅಂತಹ ಸಮೃದ್ಧವಾದ ಕಾಡಿನಲ್ಲಿ ಆಹಾರ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಉಳಿದ ಪ್ರಾಣಿಗಳ ಅವುಗಳನ್ನು ಗೇಲಿ ಮಾಡುತ್ತಿದ್ದವು. ಆದರೂ ಇರುವೆಗಳು ದೂರದೂರದಿಂದ ಕಷ್ಟಪಟ್ಟು ಆಹಾರವನ್ನು ಸಂಗ್ರಹಿಸಿ ತರುವ ಕೆಲಸವನ್ನು ಕೈಬಿಟ್ಟಿರಲಿಲ್ಲ.


 ಸದಾ ಸೋಮಾರಿಗಳಾಗಿದ್ದ ಮರದ ಮೇಲಿನ ಪ್ರಾಣಿ ಪಕ್ಷಿಗಳು ಎಷ್ಟೋ ಬಾರಿ ಆ ಮರವನ್ನು ಬಿಟ್ಟು ಕದಲುತ್ತಿರಲಿಲ್ಲ. ವರ್ಷಪೂರ್ತಿ ಅಲ್ಲೇ ಹೇರಳವಾಗಿ ಸಿಗುವ ಹಣ್ಣುಗಳನ್ನ ತಿನ್ನುತ್ತ, ಅಲ್ಲೇ ಪಕ್ಕದಲ್ಲಿದ್ದ ಕೊಳದಲ್ಲಿ ನೀರನ್ನು ಕುಡಿಯುತ್ತಾ ಸಮಯ ಕಳೆಯುತ್ತಿದ್ದವು. ಇತರ ಜಾಗಗಳಿಗೆ ಹೋಗಿ ಆಹಾರವನ್ನು ಹುಡುಕುವ ಕೆಲಸವೇ ಅವುಗಳಿಗೆ ಮರೆತುಹೋಗಿತ್ತು.


 ಹೀಗಿರುವಾಗ ಒಂದು ದಿನ ಆ ಕಾಡಿನಲ್ಲಿ ಕಾಡ್ಗಿಚ್ಚು ಹಬ್ಬಿತು. ಅದರ ಬಿಸಿ ತಾಗುತ್ತಿದ್ದಂತೆ ಪ್ರಾಣಿ ಪಕ್ಷಿಗಳೆಲ್ಲ ಸುರಕ್ಷಿತ ಜಾಗವನ್ನು ಅರಸಿ ಓಡತೊಡಗಿದವು. ಎತ್ತ ಕಡೆ ಹೋಗಬೇಕೆಂದು ತಿಳಿಯದೇ ಆ ದೊಡ್ಡ ಮರದ ಪ್ರಾಣಿಗಳೆಲ್ಲಾ ಮರದ ಕೊಂಬೆಗೆ ಅಂಟಿ ಭಯದಿಂದ ಅತ್ತಿತ್ತ ನೋಡುತ್ತಿದ್ದವು. ಅವುಗಳಿಗೆ ಆ ಮರವನ್ನು ಬಿಟ್ಟು ಹೋಗಿ ಅಭ್ಯಾಸವೇ ಇರಲಿಲ್ಲ. ಆ ದಟ್ಟ ಕಾಡಿನಲ್ಲಿ ಯಾವ ಕಡೆ ಹೋದರೆ ಏನು ಸಿಗುತ್ತದೆ ? ಎಲ್ಲಿ ಸುರಕ್ಷಿತವಾಗಿ ಉಳಿದುಕೊಳ್ಳಬಹುದು?  ಎಂಬ ಕನಿಷ್ಠ ಮಾಹಿತಿಯೂ ಇರಲಿಲ್ಲ.


 ಅದೃಷ್ಟವಶಾತ್ ಆ ಮರದ ಸ್ವಲ್ಪ ದೂರದಲ್ಲಿ ಹಾದು ಹೋದ ಕಾಡ್ಗಿಚ್ಚು ಮರಕ್ಕೆ ಹೆಚ್ಚೇನು ಘಾಸಿ ಮಾಡಿರಲಿಲ್ಲ. ಆದರೆ ಎಲೆಗಳು, ಹೂಗಳು ಕಾಡ್ಗಿಚ್ಚಿನ ಬಿಸಿಗೆ ಕರಟಿ ಹೋಗಿದ್ದವು. ಆ ವರ್ಷ ಆ ಮರದಲ್ಲಿ ಯಾವುದೇ ಹಣ್ಣುಗಳು ಬಿಡುವ ಸಂಭವವೇ ಇರಲಿಲ್ಲ. ಕಷ್ಟಪಟ್ಟು ಆಹಾರ ಸಂಪಾದಿಸುವ ಅಭ್ಯಾಸವನ್ನೇ ಮರೆತುಹೋಗಿದ್ದ ಪ್ರಾಣಿ-ಪಕ್ಷಿಗಳು ಕಷ್ಟದ ದಿನಗಳನ್ನು ಎದುರಿಸಬೇಕಾಯಿತು. ಒಂದು ಹೊತ್ತು ಸಹ ಹೊಟ್ಟೆ ತುಂಬಿಸಿಕೊಳ್ಳಲು ಅವುಗಳಿಗೆ ಕಷ್ಟವೆನಿಸಿತು. 


ಆದರೆ ಸಾಕಷ್ಟು ಆಹಾರವನ್ನು ಸಂಗ್ರಹಿಸಿದ ಇರುವೆಗಳಿಗೆ ಈಗಲೂ ಎಲ್ಲಿ ಹೋದರೆ ಯಾವ ಆಹಾರ ಸಂಪಾದಿಸಬಹುದು ಎಂಬುದು ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವು ಈ ಕಷ್ಟದಿಂದ ಸುಲಭವಾಗಿ ಪಾರಾದವು ಮತ್ತು ಒಂದು ಹೊತ್ತು ಕೂಡಾ ಹಸಿವಿನ ಸಮಸ್ಯೆಯಿಂದ ಬಳಲದೇ ಸುಖವಾಗಿ ಇದ್ದವು. ಇರುವೆಗಳನ್ನು ನೋಡಿ ಗೇಲಿ ಮಾಡುತ್ತಿದ್ದ ಇತರ ಪ್ರಾಣಿ ಪಕ್ಷಿಗಳು ಈಗ ಅವುಗಳ ಚಾತುರ್ಯಕ್ಕೆ ತಲೆದೂಗಿದವು. ಇನ್ನು ಮುಂದೆ ನಾವು ಸಹ ಅವುಗಳಂತೆ ಕಷ್ಟಪಟ್ಟು ಆಹಾರ ಸಂಪಾದನೆ ಮಾಡಬೇಕು ಎಂಬ ಪಾಠವನ್ನು ಕಲಿತುಕೊಂಡವು. ಕೈಗೆಟುಕುವ ಕುಡಿಕೆ ಹೊನ್ನು ಯಾವಾಗಬೇಕಾದರೂ ಬರಿದಾಗ ಬಹುದು ಮತ್ತು ಅದನ್ನು ಮಾತ್ರ ನಂಬಿಕೊಂಡಿದ್ದರೆ ಬದುಕು ಸಾಗಿಸಲು ಸಾಧ್ಯವಿಲ್ಲ ಎಂದು ಅರಿತವು.


**************

ಶ್ರೀಕಲಾ ಬಿ ಕಾರಂತ್

ಅಳಿಕೆ, ಬಂಟ್ವಾಳ ತಾಲೂಕು

ಕತೆ ೦೯

ಮಕ್ಕಳ ನೀತಿಕಥೆ: ಮಾರ್ಗದರ್ಶನ

ರಂಗಪ್ಪನಿಗೆ ನಾಲ್ಕು ಜನ ಗಂಡು ಮಕ್ಕಳು.ಒಳ್ಳೆಯ ಕೆಲಸಗಾರ ಸಹ.ಹೈನುಗಾರಿಕೆಯಲ್ಲಿಯೇ ತನ್ನ ಸಂಸಾರವನ್ನು ನಡೆಸುತ್ತಿದ್ದ ಪ್ರಾಮಾಣಿಕನಾಗಿದ್ದ.ತನ್ನ ಮಕ್ಕಳ ಅವಸ್ಥೆ ನೋಡಿ ತುಂಬಾ ದು:ಖಿಸುತ್ತಿದ್ದ.ಓದುವುದರಲ್ಲಿ,ತಂದೆಗೆ ಸಹಾಯ ಮಾಡುವುದರಲ್ಲಿ ,ಯಾವುದಲ್ಲಿಯೂ ಮನಸ್ಸಿಲ್ಲದ ಸೋಮಾರಿಗಳಾಗಿದ್ದರು.

ಎರಡು ಮಕ್ಕಳು ಪ್ರೌಢಶಾಲೆಯಲ್ಲಿ,ಇನ್ನೆರಡು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದರು.ಬುದ್ಧಿವಾದ ಹೇಳಿ ಸೋತುಹೋಗಿದ್ದ.


ಒಂದು ದಿನ ಬೆಳಿಗ್ಗೆ ಹಾಲು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಮಗ ಶರಣನ ಗುರುಗಳು ಎದುರು ಸಿಕ್ಕಿದರು.ನಮಸ್ಕಾರ ವಿನಿಮಯವಾಯಿತು.ಗುರುಗಳೇ'ನನ್ನ ನಾಲ್ಕು ಮಕ್ಕಳು ಮಹಾ ಸೋಮಾರಿಗಳು,ದಡ್ಡರು,ಓದು ಬರಹ ಎರಡೂ ಇಲ್ಲ,ಮನೆ ಹಟ್ಟಿ ಕೆಲಸದಲ್ಲೂ ಕೈಜೋಡಿಸುತ್ತಿಲ್ಲ,ಏನಾದರೂ ಮಾಡಿ ಅವರನ್ನು ಸರಿ ದಾರಿಗೆ ತರಬೇಕು,ನೀವೇ ಒಂದು ಉಪಾಯ ಮಾಡಿ ಕಾಪಾಡಿ' ಎಂದು ಅಂಗಲಾಚಿದ.ಶೇಖರ ಗುರುಗಳಿಗೆ ಮಕ್ಕಳ ಬಗ್ಗೆ ಶಾಲೆಗೆ ಬಂದು ಕರ್ತವ್ಯಕ್ಕೆ ಸೇರುವಾಗ ಎಲ್ಲಾ ವಿಷಯ ಬೇರೆ ಅಧ್ಯಾಪಕರು ಹೇಳಿದ್ದರು.ಶಾಲೆ ಹತ್ತಿರವೇ ಸಣ್ಣ ಮನೆ ಬಾಡಿಗೆಗೆ ಮಾಡಿದ್ದರು.ರಂಗಪ್ಪನ ಕೈಯನ್ನು ಹಿಡಿದು ಸಮಾಧಾನ ಪಡಿಸಿದರು.'ನಾಳೆಯಿಂದಲೇ ನಿಮ್ಮ ಮಕ್ಕಳನ್ನು ನನ್ನ ಮನೆಗೆ ಕಳುಹಿಸಿರಿ.ನಿತ್ಯವೂ ಒಂದು ಗಂಟೆ ಅವರಿಗೆ ಹೆಚ್ಚಿನ ಕಾಳಜಿ ವಹಿಸಿ ಕಲಿಸ್ತೇನೆ.ನನಗೆ ನೀವೇನೂ ಕೊಡುವುದು ಬೇಡ.ಮಕ್ಕಳು ಎಲ್ಲರ ಹಾಗೆ ಆದರೆ ಸಾಕು,ನೀವು ಹಿರಿಯರು ಬೇಸರಮಾಡಿಕೊಳ್ಳಬೇಡಿ' ಎಂದರು. ಮರುದಿನದಿಂದ ನಾಲ್ವರು ಮಕ್ಕಳು ಮೇಷ್ಟ್ರ ಮನೆಗೆ ಹೋಗಲಾರಂಭಿಸಿದರು.


ಶೇಖರ ಗುರುಗಳು ಮಕ್ಕಳನ್ನು ಹತ್ತಿರ ಕೂರಿಸಿ ,ಅವರ ಮನಸ್ಸಿನಲ್ಲಿದ್ದ ವಿಷಯಗಳನ್ನೆಲ್ಲ ಕೇಳಿ ತಿಳಿದುಕೊಂಡರು.ಮಕ್ಕಳೇನೋ ಬುದ್ಧಿವಂತರೇ,ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಹೀಗಾಗಿದ್ದಾರೆಂದು ಗೊತ್ತಾಯಿತು.ಮಕ್ಕಳೇ' ಹೇಳಿದ ಕೆಲಸವನ್ನು ಮಾಡಬೇಕು.ದೊಡ್ಡವರನ್ನು ಬೇಸರ ಪಡಿಸಬಾರದು.ಶಾಲಾ ವಯಸ್ಸಿನಲ್ಲಿ ಕಲಿಯಬೇಕು.ದೊಡ್ಡವರಾದ ಮೇಲೆ ಓದಲಾಗುವುದಿಲ್ಲ.ಹೀಗೆ ಓದಿ ಮುಂದೆ ನಿಮ್ಮ ಕಾಲಮೇಲೆ ನೀವು ನಿಲ್ಲಬೇಕು.ನಿಮ್ಮ ತಂದೆ ಕಷ್ಟ ಬರುವುದು ಗೊತ್ತಿಲ್ಲವೇ ನಿಮಗೆ?ಎಷ್ಟು ದಿನ ಅಪ್ಪ ಸಾಕಿಯಾರು ನಿಮ್ಮನ್ನು?ನಿಮಗೆ ಗೊತ್ತೇ *ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು* ಗಾದೆ ಮಾತಿದೆ.

ಆಯಾಯ ವಯಸ್ಸಿನಲ್ಲಿ ಆಗುವುದು ಆಗಲೇಬೇಕು.ನಾವು ಎಷ್ಟೇ ಗಳಿಸಿದರೂ ,ಪುನ:ಅದಕ್ಕೆ ಕೂಡಿಸದಿದ್ದರೆ ಅಲ್ಲಿದ್ದ ಸಂಪತ್ತು ,ಹಣ ಖಾಲಿಯಾಗಬಹುದು.ನಮ್ಮ ಬದುಕು ನಿಂತ ನೀರಲ್ಲ.ನಿಂತ ನೀರು ಕ್ರಿಮಿಗಳನ್ನು ಉತ್ಪಾದಿಸಿ ಆರೋಗ್ಯ ಕೆಡಿಸಬಹುದು.ನಾವು ಹರಿಯುವ ನೀರಾಗಿ ನಾಲ್ಕು ಜನರಿಗೆ ಸಹಾಯ ಮಾಡಬೇಕು.*ಕಾಯಕವೇ ಕೈಲಾಸ* ದುಡಿಮೆಯಲ್ಲಿ ಶಿವನನ್ನು ಕಾಣಬೇಕು.ಕೈ ಕೆಸರಾರೆ ಬಾಯಿಗೆ ಮೊಸರು.ಮಕ್ಕಳೇ ಚೆನ್ನಾಗಿ ಓದಿ ಕಲಿಯಿರಿ,ನಾನೇ ಕಲಿಸ್ತೇನೆ. ಒಳ್ಳೆಯ ಮಕ್ಕಳಾಗಿ.ಒಂದು ಕೊಡದಲ್ಲಿರುವ ನೀರನ್ನು ತೆಗೆದಾಗ ಅದು ಮುಗಿಯುತ್ತದೆ.ಹಾಗೆಯೇ ಹಣ,ಸಂಪತ್ತು ಸಹ'ಎಂದರು.ಎಲ್ಲಾ ಮಕ್ಕಳ ಕಣ್ಣಿಂದ ನೀರು ಇಳಿಯಿತು. 'ಖಂಡಿತಾ ಇನ್ನು ಮುಂದೆ ಚೆನ್ನಾಗಿ  ಓದುತ್ತೇವೆಂದು 'ಮಾತುಕೊಟ್ಟರು.ಗುರುಗಳಿಗೆ ಸಂತೋಷವಾಯಿತು.


✍️ರತ್ನಾ ಕೆ ಭಟ್,ತಲಂಜೇರಿ

ಕತೆ ೧೦

ಶೀರ್ಷಿಕೆ:- ಪಶ್ಚಾತ್ತಾಪ


ಗಾದೆಗಳು ಹಿಂದಿನ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯ ವಾಕ್ಯಗಳು.ಈ ಗಾದೆ ಮಾತಿನ ಅರ್ಥ, ವ್ಯಕ್ತಿ ಎಷ್ಟೇ  ಶ್ರೀಮಂತನಾಗಿದ್ದರೂ ತಾನು ಮಾಡುವ ಕೆಲಸವನ್ನು ಮಾತ್ರ ಮುಂದುವರಿಸುತ್ತಲೇ ಇರಬೇಕು. ನನಗೇನು, ಹಣವಿದೆ ಎಂದು ತನ್ನ ಕೆಲಸದಲ್ಲಿ ಅಸಡ್ಡೆ ಅಥವಾ ಉದಾಸೀನ ತೋರಿದರೆ,ಅಲ್ಲದೆ ಅವನು ಕೆಲಸವನ್ನು ಮುಂದುವರಿಸದಿದ್ದರೆ ಆತ  ಎಷ್ಟೇ ಹಣವಂತನಾಗಿರಲಿ, ಒಂದಲ್ಲ ಒಂದು ದಿನ ಬಡವನಾಗುತ್ತಾನೆ. ಎಷ್ಟೇ ಹಣವಿದ್ದರೂ ಅದನ್ನು ಮರು ತುಂಬದೆ ಬರಿಯ ಖರ್ಚು ಮಾಡುತ್ತಾ ಹೋದರೆ ಅದು ಖಾಲಿಯಾಗುತ್ತಾ ಹೋಗುತ್ತದೆ. ಇದನ್ನು ಅರಿತ ನಮ್ಮ ಪೂರ್ವಜರು ಎಚ್ಚರಿಕೆಯ ರೂಪದಲ್ಲಿ 'ಕೂತು ತಿಂದರೆ ಕುಡಿಕೆ ಹೊನ್ನು ಸಾಲದು’ ಎಂದು ಹೇಳುತ್ತಿದ್ದರು.ಮಕ್ಕಳೇ ನಾವು ಜೀವನದಲ್ಲಿ ಆಯಾ ಸಮಯಕ್ಕೆ ತಕ್ಕಂತೆ,ನಾವು ಹೇಗೇ ಕೆಲಸವನ್ನು  ಮಾಡುತ್ತಿರಬೇಕು,ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಈ ಕಥೆಯ ಮೂಲಕ ತಿಳಿಯೋಣ:-


ಆಗರ್ಭ ಶ್ರೀಮಂತರಾದ ರಾಜರಾಮಯ್ಯನವರ ಒಬ್ಬನೇ ಮುದ್ದಿನ ಮಗ ಗೌರವ.ತಾಯಿ ಇಲ್ಲದ ಮಗುವೆಂದು ಅವನನ್ನು ಮುದ್ದಾಗಿ ಸಾಕಿದ್ದರು.ಆದರೆ ಅವನ ಹೆಸರಿಗೆ ಅವನ ಬುದ್ದಿ ವಿರುದ್ದವಾಗಿತ್ತು.ಅವನು ಮಾಡುವ ಕೆಲಸವೆಲ್ಲಾ ಅಗೌರವವಾಗಿತ್ತು. ಮನೆಯಲ್ಲಿ ಇದ್ದರೆ ತನ್ನ ವಿಲಾಸಿ ಜೀವನಕ್ಕೆ ತಂದೆ ಅಡ್ಡಿಯಾಗಬಹುದೆಂದು ಹಾಸ್ಟೆಲ್ ನಲ್ಲಿ ಇದ್ದು ಓದುತ್ತಿದ್ದ.ರಾತ್ರಿಯಾದರೆ ಸಾಕು ತನ್ನ ಗೆಳೆಯ-ಗೆಳತಿಯರೊಂದಿಗೆ ಪಬ್ ಹೋಗಿ ಮಜಾ ಮಾಡುತ್ತಿದ್ದ. ವಾರ್ಡನ್ ಎಷ್ಟೊಂದು ಎಚ್ಚರಿಕೆ ನೀಡಿದರೂ ಕೇಳುತ್ತಿರಲಿಲ್ಲ. ಇದರಿಂದ ಬೇಸತ್ತ ವಾರ್ಡನ್ ಅವನ ತಂದೆಗೆ ವಿಷಯ ತಿಳಿಸಿ,ಅಲ್ಲಿಂದ ಮನೆಗೆ ಕಳಿಸಿದರು.


ಮನೆಯಲ್ಲಿ ಮಗನ ದುರ್ನಡತೆ ನೋಡಿ ರಾಜಾರಾಮಯ್ಯನವರಿಗೆ ತುಂಬಾ ಬೇಸರವಾಯಿತು.ಮಗನಿಗೆ ಸರಿಯಾಗಿ ಬುದ್ದಿ ಹೇಳಿದರು.'ಕೆಟ್ಟ ಅಭ್ಯಾಸಗಳನ್ನು ಬಿಟ್ಟು,ತನ್ನ ವ್ಯವಹಾರವನ್ನು ನೋಡಿಕೊಳ್ಳು, ನಾವು ಯೌವನದಲ್ಲಿ ಹಣ ಮತ್ತು ಆರೋಗ್ಯವನ್ನು  ಚೆನ್ನಾಗಿ ಕಾಪಾಡಿಕೊಂಡರೆ,ಮುಂದೆ ಮುಪ್ಪಿನಲ್ಲಿ ಅದೇ ನಮ್ಮನ್ನು ಕಾಪಾಡುತ್ತದೆ' ಎಂದು ಎಷ್ಟು ತಿಳಿ ಹೇಳಿದರೂ,ಮಗ ಆ ಮಾತನ್ನು ಕೇಳದಷ್ಟೂ ಮುಂದೆ ಹೋಗಿದ್ದ.ತನ್ನ ನಂತರ ತನ್ನ ಮಗನ ಗತಿಯೇನು ಎನ್ನುವ ಚಿಂತೆಯಲ್ಲಿ ರಾಯರು ಹಾಸಿಗೆ ಹಿಡಿದರು.ತಂದೆ ಕಾಯಿಲೆಯಿಂದ ಮಲಗಿದ್ದು, ಗೌರವನಿಗೆ ಲಾಭವೇ ಆಯಿತು.ಮನೆಯಲ್ಲಿದ್ದ ಹಣ,ಚಿನ್ನವನ್ನೆಲ್ಲಾ ಕದ್ದುಕೊಂಡು ಹೋಗಿ ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದ.ಗೆಳೆಯ-ಗೆಳತಿಯರೊಂದಿಗೆ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದ.ಇದನ್ನೆಲ್ಲಾ ನೋಡಲಾಗದೆ ರಾಯರು ಕಣ್ಣು ಮುಚ್ಚಿದರು.


ತಂದೆ ಸತ್ತ ನಂತರ ಇದ್ದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದ.ಏನು ಕೆಲಸ ಮಾಡುತ್ತಿರಲಿಲ್ಲ. ಹೀಗೆ ಮುಂದೆ ಹಣವೆಲ್ಲಾ ಖಾಲಿಯಾದ ಮೇಲೆ ಗೌರವನಿಗೆ ಮುಂದೇನೂ ಎನ್ನುವ ಪ್ರಶ್ನೆ ಮೂಡಿತು.ಇವನಲ್ಲಿ ಹಣ ಇಲ್ಲಾ ಎಂದು ಗೊತ್ತಾದ ಮೇಲೆ ಗೆಳೆಯರೆಲ್ಲರೂ ಇವನಿಂದ ದೂರ ಸರಿದರು.ಈಗ ಅವನಿಗೆ ತಂದೆ ಹೇಳಿದ ಒಂದೊಂದು ಮಾತು ನೆನಪಿಗೆ ಬರತೊಡಗಿತು.ಛೇ..!! ತಾನು ತಪ್ಪು ಮಾಡಿದೆನೆಂಬ ಭಾವನೆ ಅವನಲ್ಲಿ ಬರತೊಡಗಿತು. ಆದರೆ ಪರಿಸ್ಥಿತಿ ಕೈ ಮೀರಿ ಹೋಗಿತ್ತು.ಅವನ ಆರೋಗ್ಯವು ಸಂಪೂರ್ಣವಾಗಿ ಕೆಟ್ಟಿತು.ತನ್ನ ಮುಂದಿನ ಜೀವನಕ್ಕೆ ಗತಿ ಏನು ಎಂದು ತನ್ನ ಗತಿಸಿದ ತನ್ನ ತಂದೆ-ತಾಯಿಯನ್ನು ನೆನಪಿಸುತ್ತಾ ಅಳುತ್ತಾ ಕಣ್ಣು ಮುಚ್ಚಿ ಮಲಗಿದ.


✍️ ಮಾಲತಿ ರಮೇಶ್, ಕೆಮ್ಮಣ್ಣು

ಕಥೆ ೧೧

🍁ದುಡಿತವೇ ದುಡ್ಡಿನ ತಾಯಿ


ಮಕ್ಕಳೇ ನಿಮಗೆ ಇಂದು ನಾನು ಒಂದು ನೀತಿ ಕಥೆಯನ್ನು ಹೇಳುತ್ತೇನೆ. ನೀತಿ ಕಥೆ ಯಲ್ಲಿ ಜೀವನ ಹೇಗೆ ನಡೆಸಬೇಕು ಎಂಬ ಸಂದೇಶವಿರುತ್ತದೆ. ತಿದ್ದಿ ಬಾಳುವಂತಹ ಮಾರ್ಗದರ್ಶನ ಇರುತ್ತದೆ. ಶಿವಪುರ ಗ್ರಾಮದಲ್ಲಿ ದೀಪಕ ಎಂಬ ವ್ಯಕ್ತಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಬೆಳಗಿನಿಂದ ಸಂಜೆವರೆಗೆ ದುಡಿದು ಸಂಜೆಯಾಗುತ್ತಲೇ      ಮನೆಗೆ ಬೇಕಾದ ದಿನಸಿ ಉಪ್ಪು ಬೇಳೆ ಅಕ್ಕಿಗಳನ್ನೆಲ್ಲ ತೆಗೆದುಕೊಂಡು ಬಂದು ಮನೆಯಲ್ಲಿ ಮಕ್ಕಳ ಜೊತೆಗೆ ಹೆಂಡತಿ ಮಾಡಿದ ಅನ್ನ ಸಾರು ಪಲ್ಯ ವನ್ನುಎಲ್ಲರೂ ಕೂತು ಊಟ ಮಾಡುತ್ತಿದ್ದರು.ತುಂಬಿದ ಸಂಸಾರ ಮಕ್ಕಳೆಲ್ಲರೂ ಶಾಲೆಗೆ ಹೋಗುತ್ತಿದ್ದರು.ದೀಪಕನಿಗೆ ಶ್ರೀಮಂತರ ಜನರ ಜೀವನವನ್ನ ಕಂಡಾಗ ತಾನೂ ಅವರಂತೆ ಕಾರಿನಲ್ಲಿ ಓಡಾಡಬೇಕು, ಐಷಾರಾಮಿ ಜೀವನ ನಡೆಸಬೇಕು, ದೊಡ್ಡ ಬಂಗಲೆಯಲ್ಲಿ ಇರಬೇಕು, ಕೈತುಂಬಾ ಆಳುಕಾಳುಗಳ ಇರಬೇಕು ಎಂದು ಅನಿಸುತ್ತಿತ್ತು. ಮಕ್ಕಳನ್ನು ಉತ್ತಮ ಶಾಲೆಯಲ್ಲಿ ಸೇರಿಸಬೇಕೆಂದು ಹಂಬಲ ತುಂಬಾನೇ ಇತ್ತು.ಒಂದು ದಿನ

ವ್ಯಾಪಾರಕ್ಕೆಂದು ಕುಳಿತಾಗ ಪರಿಚಯಸ್ಥ ಹಿರಿಯರೊಬ್ಬರು ಒಂದು ಅಕಸ್ಮಾತಾಗಿ ಇವನ ಹತ್ತಿರ ಖರೀದಿ ಆರಂಭಿಸಿದರು. ಮಾತನಾಡುತ್ತಲೇ ದೀಪಕ ದೊಡ್ಡ ಬಂಗಲೆ ಆಸ್ತಿ ಇರುವಂತಹ ನನ್ನ ಗೆಳೆಯ ರಾಮದಾಸನ ಮಗನೆಂದು ತಿಳಿಯಿತು.ತುಂಬಾ ಸಂತೋಷಗೊಂಡ ಅವರು ದೀಪಕನಿಗೆ ಮನೆಗೆ ಬರಹೇಳಿದರು. ಯಾವ ವಿಷಯವೂ ದೀಪಕ ನಿಗೆ ಗೊತ್ತಿರಲಿಲ್ಲ.ವಿಳಾಸ ಹುಡುಕುತ್ತಾ ಹೋದಂತಹ ದೀಪಕನಿಗೆ ಕೊನೆಗೆ ಅಲ್ಲಿ ಕಾದಿದ್ದು ತುಂಬಾ ದೊಡ್ಡ ಆಶ್ಚರ್ಯ.ಏನಂದರೆ ರಾಮದಾಸರು ಕೋಟ್ಯಾಂತರ ರೂಪಾಯಿ ಆಸ್ತಿಯ ನಾಲ್ಕೈದು ಮಹಡಿ ಇರುವಂತಹ ಮನೆಯನ್ನು ದೀಪಕನ ಹೆಸರಿಗೆ ಬಿಟ್ಟು ಹೋಗಿದ್ದರು. ಚಿಕ್ಕವನಿದ್ದಾಗ ತಂದೆ ಇನ್ನೊಂದು ಮದುವೆ ಮಾಡಿಕೊಂಡು ರಾಮದಾಸರು ಕೊನೆಯಲ್ಲಿ ಎರಡನೇ ಹೆಂಡತಿಯಿಂದ ಮೋಸಹೋಗಿ ವಕೀಲರೊಬ್ಬರನ್ನು ಹಿಡಿದು ಎಲ್ಲಾಆಸ್ತಿಯನ್ನು ಮೊದಲ ಹೆಂಡತಿಯ ಮಗ ದೀಪಕ ನಿಗೆ ಬರೆದು ಆಸ್ತಿ ಪತ್ರಕೊಡ ಬೇಕೆನ್ನುವಷ್ಟರಲ್ಲಿ  ಕಾರ್ ಅಪಘಾತದಲ್ಲಿ ತೀರಿಹೋಗಿ ಬಿಟ್ಟಿದ್ದರು.ದೀಪಕ ತನ್ನ ಅಮ್ಮನ ಜೊತೆಗೆ ಊರನ್ನ ಬಿಟ್ಟು ಹೋಗಿ ಎಲ್ಲೋ ಸಿಟಿಯ ಕಡೆಗೆ ಕೆಲಸ ಮಾಡಿಕೊಂಡು ದೀಪಕನನ್ನು ಸಾಕಿದ್ದಳು.ದೀಪಕ ಹೆಸರಿಗೆ ಬರೆದಿದ್ದ ಆಸ್ತಿ ದೀಪಕನಿಗೆ ಹಸ್ತಾಂತರವಾಯಿತು, ದೀಪಕನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಣ್ತುಂಬ ಶ್ರೀಮಂತನಾಗಬೇಕೆಂಬ ಕನಸು ಕಂಡಿದ್ದ ಇವನಿಗೆ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ ಹಣ ಎಲ್ಲವೂ ದೊರಕಿತ್ತು. ಹೆಂಡತಿ-ಮಕ್ಕಳಿಗೆ ವ್ಯಾಪಾರಕ್ಕೆಂದು ಹೋಗುವುದನ್ನೇ ನಿಲ್ಲಿಸಿದ.ಎರಡು ಮಹಲುಗಳನ್ನು ಮಾರಿ ಕೋಟ್ಯಂತರ ರೂಪಾಯಿಯನ್ನು ಬ್ಯಾಂಕ್ ನಲ್ಲಿ ಇಟ್ಟು ಇನ್ನೊಂದುಮಹಲಿನಲ್ಲಿ ಐಷಾರಾಮಿ ಜೀವನವನ್ನು ನಡೆಸಲಾರಂಭಿಸಿದ. ಲಕ್ಷಾಂತರ ಇರುವಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ.ಬೇಕಾದಂತಹ ಭೂರಿಬೋಜನ ಪ್ರತಿದಿನವೂಮಾಡಿ , ಐಷಾರಾಮಿಕಾರನ್ನು ಖರೀದಿಸಿ, ಹಾಕಿ ವಿದೇಶ ಪ್ರಯಾಣ ಕೂಡ ಮಾಡಿದ. ದುಡಿತವೇ ಏನೂ ಇರಲಿಲ್ಲ. ಕಾಲಕ್ರಮೇಣ ಮಕ್ಕಳ ಶಾಲೆ ನಿರ್ವಹಣೆ ಐಷಾರಾಮಿ ಜೀವನದ ಮನೆ ನಿರ್ವಹಣೆ ಕೆಲಸವಲ್ಲವೇ ನಡೆದ ಐಷಾರಾಮಿ ಜೀವನ ಮಾಡಿಕೊಂಡಂತಹ ಚಟಗಳು,ಎಲ್ಲವೂ ಕೂಡಿಟ್ಟ ಹಣವನ್ನು ಕರಗಿಸತೊಡಗಿತು. ಯಾವುದನ್ನ ವ್ಯಾಪಾರ ಮಾಡುತ್ತಿದ್ದೆ ಎಂದು ಮರೆತುಹೋಗಿದ್ದ ಇವನಿಗೆಹಣದ ಕೊರತೆ ಕಾಣಲಾರಂಭಿಸಿತು. ವ್ಯಾಪಾರಕ್ಕೆಂದು ಹೋದರೆಅ  ಅವನ ಜಾಗದಲ್ಲಿ ಇನ್ನಾರು ಅಂಗಡಿಯನ್ನು ಹಾಕಿ ಪ್ರಸಿದ್ಧಿಯನ್ನು ಪಡೆದಿದ್ದರು. ಇವನನ್ನು ಯಾರೂ ಅಲ್ಲಿ ಗುರುತಿಸಲಿಲ್ಲ. ಅನೇಕ ವರ್ಷಗಳ ವರೆಗೆ ಇವನು ಕಾಣದಿದ್ದರಿಂದ ಯಾರು ಇವನನ್ನ ಗುರುತಿಸದೆ ಅವರು ತಮ್ಮ ಪಾಡಿಗೆ ತಾವಿದ್ದರು. ಪುನಹ ವ್ಯಾಪಾರಕ್ಕೆಂದು  ತೆಗೆದುಕೊಂಡು ಹೋದ ವಸ್ತುಗಳು ಈಗ ಮಾರಾಟ ವಾಗಲಿಲ್ಲ. ಎಲ್ಲವೂ ಹಣ ಕರಗಲು ಆರಂಭಿಸಿದಾಗ ಐಷಾರಾಮಿಜೀವನಕ್ಕೆ ಒಗ್ಗಿಕೊಂಡಿದ್ದ ಇವರಿಗೆ ಮತ್ತದೇ ಬಡತನದ ಜೀವನ ಮಾಡಲಾಗಲಿಲ್ಲ.ದೀಪಕ ಬುದ್ಧಿವಂತನಾಗಿದ್ದರೆ ಸಿಕ್ಕಂತ ದೊಡ್ಡಮಟ್ಟದ ಹಣವನ್ನು ಬಿಸಿನೆಸ್ಸಿಗೆ ಎಂದು  ವಿನಿಯೋಗಿಸಿ ಒಂದಿಷ್ಟು ಆಳುಗಳನ್ನು ಇಟ್ಟು ಫ್ಯಾಕ್ಟರಿ ತರಹ ನಡೆಸಿದ್ದರೆ ಹಣದ ವ್ಯವಹಾರ ನಿರಂತರವಾಗಿ ಸಾಗಿ ಹಣದ ಕೊರತೆ ಆಗುತ್ತಿರಲಿಲ್ಲ. ಮತ್ತೆ ಪುನಹ ಸಿಕ್ಕಿದಂತಹ ಮನೆಯನ್ನು ಮಾರಿ ಬಾಡಿಗೆ ಮನೆಯಲ್ಲಿ ಜೀವನ ಮಾಡುವಂತಹ ಪರಿಸ್ಥಿತಿ ಬಂದೊದಗಿತ್ತು. ಆದ್ದರಿಂದ ಮಕ್ಕಳೇ ಎಂದಿಗೂ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ನಾಣ್ಣುಡಿಯನ್ನು ಎಂದಿಗೂ ಮರೆಯದೆ ನಿರಂತರವಾಗಿ ಶ್ರಮ ಪಡುತ್ತಲೇ ಶ್ರಮದಿಂದ ಬಂದ ಹಣದಿಂದ ಜೀವನ ಆನಂದಿಸಿರಿ.. ಶ್ರಮಪಟ್ಟು ಅಭ್ಯಾಸ ಮಾಡಿ ದೊಡ್ಡ ವ್ಯಕ್ತಿಗಳಾಗಿ ಎಂಬುದೇ ಈ ಕಥೆಯ ನೀತಿ..


✍️ ಶ್ರೀಮತಿ ರೇಖಾ ಜಿ ನಾಯಕ ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೆಳಗಾವಿ

 

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...